19
ಯೋಬನ ಉತ್ತರ 
 1 ಬಳಿಕ ಯೋಬನು ಹೀಗೆ ಉತ್ತರಕೊಟ್ಟನು: 
 2 “ಇನ್ನೆಷ್ಟರವರೆಗೆ ನೀವು ನನ್ನನ್ನು ನೋಯಿಸುವಿರಿ? 
ನಿಮ್ಮ ಮಾತುಗಳಿಂದ ನನ್ನನ್ನು ಜಜ್ಜುವಿರಿ? 
 3 ಇದುವರೆಗೆ ನೀವು ನನ್ನನ್ನು ಹತ್ತಾರು ಸಲ ಅವಮಾನ ಮಾಡಿರುವಿರಿ. 
ನೀವು ನಾಚಿಕೆಯಿಲ್ಲದೆ ನನ್ನನ್ನು ಎದುರಿಸುತ್ತೀರಿ! 
 4 ಒಂದುವೇಳೆ ನಾನು ಪಾಪಮಾಡಿದ್ದರೂ 
ಆ ತಪ್ಪು ನನ್ನದೇ. 
 5 ನಿಮ್ಮನ್ನು ನನಗಿಂತಲೂ ಉತ್ತಮರೆಂದು ತೋರಿಸಿಕೊಳ್ಳಬೇಕೆಂದಿದ್ದೀರಿ; 
ನನ್ನ ತೊಂದರೆಗಳೇ ನನ್ನನ್ನು ದೋಷಿಯೆಂದು ನಿರೂಪಿಸುತ್ತವೆಯೆಂದು ಭಾವಿಸಿಕೊಂಡಿದ್ದೀರಿ. 
 6 ಆದರೆ ನನ್ನನ್ನು ದೋಷಿಯೋ ಎಂಬಂತೆ ಮಾಡಿದಾತನು ದೇವರೇ. 
ಆತನು ನನಗೆ ವಿರೋಧವಾಗಿ ಬಲೆಯನ್ನು ಒಡ್ಡಿದ್ದಾನೆ. 
 7 ‘ನನಗೆ ಹಿಂಸೆಯಾಗುತ್ತಿದೆ’ ಎಂದು ಕೂಗಿಕೊಂಡರೂ ನನಗೆ ಯಾರೂ ಉತ್ತರ ಕೊಡುತ್ತಿಲ್ಲ. 
ನಾನು ಸಹಾಯಕ್ಕಾಗಿ ಗಟ್ಟಿಯಾಗಿ ಕೂಗಿಕೊಂಡರೂ ನ್ಯಾಯ ದೊರೆಯುತ್ತಿಲ್ಲ. 
 8 ದೇವರು ನನ್ನ ಮಾರ್ಗವನ್ನು ಮುಚ್ಚಿಬಿಟ್ಟಿದ್ದಾನೆ; ಆದ್ದರಿಂದ ನಾನು ಮುಂದೆ ಹೋಗಲಾರೆ. 
ಆತನು ನನ್ನ ಮಾರ್ಗವನ್ನು ಕತ್ತಲೆಯಲ್ಲಿ ಮರೆಮಾಡಿದ್ದಾನೆ. 
 9 ದೇವರು ನನ್ನ ಗೌರವವನ್ನು ತೆಗೆದುಹಾಕಿದ್ದಾನೆ. 
ಆತನು ನನ್ನ ತಲೆಯಿಂದ ಕಿರೀಟವನ್ನು ತೆಗೆದುಹಾಕಿದ್ದಾನೆ. 
 10 ನಾನು ಸಾಯುವ ತನಕ ದೇವರು ನನ್ನನ್ನು ಎಲ್ಲಾ ಕಡೆಗಳಿಂದಲೂ ಅಪ್ಪಳಿಸಿ ಕೆಡುವುತ್ತಿದ್ದಾನೆ. 
ಬೇರುಗಳ ಸಹಿತ ಕೀಳಲ್ಪಟ್ಟ ಮರದ ಹಾಗೆ 
ಆತನು ನನ್ನ ನಿರೀಕ್ಷೆಯನ್ನು ತೆಗೆದುಹಾಕಿದ್ದಾನೆ. 
 11 ದೇವರ ಕೋಪವು ನನಗೆ ವಿರೋಧವಾಗಿ ಉರಿಯುತ್ತಿದೆ. 
ಆತನು ನನ್ನನ್ನು ತನ್ನ ಶತ್ರುವೆಂದು ಪರಿಗಣಿಸಿದ್ದಾನೆ. 
 12 ನನ್ನ ಮೇಲೆ ಆಕ್ರಮಣಮಾಡಲು ದೇವರು ತನ್ನ ಸೈನ್ಯವನ್ನು ಕಳುಹಿಸಿದ್ದಾನೆ. 
ಅವರು ನನಗೆ ವಿರುದ್ಧವಾಗಿ ದಿಬ್ಬಹಾಕಿದ್ದಾರೆ. 
ಅವರು ನನ್ನ ಗುಡಾರದ ಸುತ್ತಲೂ ಪಾಳೆಯ ಮಾಡಿಕೊಂಡಿದ್ದಾರೆ. 
 13 “ನನ್ನ ಸಹೋದರರು ನನ್ನನ್ನು ತೊರೆದುಬಿಡುವಂತೆ ದೇವರು ಮಾಡಿದ್ದಾನೆ. 
ನಾನು ನನ್ನ ಸ್ನೇಹಿತರಿಗೆಲ್ಲಾ ಅಪರಿಚಿತನಾಗಿದ್ದೇನೆ. 
 14 ನನ್ನ ಸಂಬಂಧಿಕರು ನನ್ನನ್ನು ತೊರೆದುಬಿಟ್ಟರು. 
ನನ್ನ ಸ್ನೇಹಿತರು ನನ್ನನ್ನು ಮರೆತುಬಿಟ್ಟರು. 
 15 ನನ್ನ ಮನೆಯಲ್ಲಿರುವ ಸಂದರ್ಶಕರೂ ನನ್ನ ದಾಸಿಯರೂ 
ನನ್ನನ್ನು ಅಪರಿಚಿತನಂತೆ ಮತ್ತು ಪರದೇಶಿಯಂತೆ ಕಾಣುತ್ತಾರೆ. 
 16 ನಾನು ನನ್ನ ಸೇವಕನನ್ನು ಕರೆದರೂ ಅವನು ನನಗೆ ಉತ್ತರಿಸುವುದಿಲ್ಲ. 
ನಾನು ಸಹಾಯಕ್ಕಾಗಿ ಬೇಡಿಕೊಂಡರೂ ನನ್ನ ಸೇವಕನು ಉತ್ತರ ಕೊಡುವುದಿಲ್ಲ. 
 17 ನನ್ನ ಹೆಂಡತಿಗೂ ನನ್ನ ಉಸಿರು ಅಸಹ್ಯವಾಗಿದೆ. 
ನನ್ನ ಸ್ವಂತ ಮಕ್ಕಳೂ ನನ್ನನ್ನು ಕಂಡು ಹೇಸಿಗೆಪಡುತ್ತಾರೆ. 
 18 ಚಿಕ್ಕಮಕ್ಕಳೂ ನನ್ನನ್ನು ಗೇಲಿ ಮಾಡುತ್ತಾರೆ; 
ನನ್ನನ್ನು ಕಂಡಾಗ ನಗುತ್ತಾರೆ. 
 19 ನನ್ನನ್ನು ನೋಡಿ ನನ್ನ ಆಪ್ತಸ್ನೇಹಿತರೂ ಅಸಹ್ಯಪಡುತ್ತಾರೆ. 
ನಾನು ಯಾರನ್ನು ಪ್ರೀತಿಸಿದೆನೋ ಅವರೂ ನನಗೆ ವಿರೋಧವಾಗಿ ಎದ್ದಿದ್ದಾರೆ. 
 20 “ನನ್ನ ಶಕ್ತಿಯೆಲ್ಲಾ ಕಳೆದುಹೋಗಿದೆ; ನಾನು ಅಸ್ಥಿಪಂಜರದಂತೆ ಆಗಿರುವೆ. 
ನನ್ನಲ್ಲಿ ಸ್ವಲ್ಪ ಜೀವ ಮಾತ್ರ ಉಳಿದುಕೊಂಡಿದೆ. 
 21 “ನನ್ನ ಸ್ನೇಹಿತರೇ, ಕರುಣಿಸಿರಿ, ನೀವಾದರೂ ನನ್ನನ್ನು ಕರುಣಿಸಿರಿ. 
ದೇವರ ಹಸ್ತವು ನನ್ನನ್ನು ಹೊಡೆದಿದೆ. 
 22 ದೇವರು ಹಿಂಸಿಸುವಂತೆ ನೀವೂ ನನ್ನನ್ನು ಯಾಕೆ ಹಿಂಸಿಸುತ್ತೀರಿ? 
ನೀವು ಹಿಂಸೆಪಡಿಸಿದ್ದು ಸಾಕಾಗಲಿಲ್ಲವೇ? 
 23 “ನನ್ನ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಬರೆದಿಟ್ಟರೆ ಎಷ್ಟೋ ಒಳ್ಳೆಯದು. 
ಸುರುಳಿಯಲ್ಲಿ ಬರೆದಿಟ್ಟರೆ ಅದೆಷ್ಟೋ ಮೇಲು. 
 24 ನನ್ನ ಮಾತುಗಳನ್ನು ಸೀಸದ ಹಲಗೆಯ ಮೇಲೆಯೂ ಬಂಡೆಯ ಮೇಲೆಯೂ ಕೆತ್ತಿದರೆ 
ಎಷ್ಟೋ ಒಳ್ಳೆಯದು. ಆಗ ಅವು ಶಾಶ್ವತವಾಗಿರುತ್ತವೆ. 
 25 ಜೀವಸ್ವರೂಪನಾದ ಒಬ್ಬನು ನನ್ನ ಪರವಾಗಿ ವಾದಿಸುತ್ತಾನೆಂದು ನನಗೆ ಗೊತ್ತಿದೆ; 
ಕೊನೆಯಲ್ಲಿ, ಆತನು ಭೂಮಿಯ ಮೇಲೆ ನಿಂತುಕೊಂಡು ನನಗೋಸ್ಕರ ವಾದಿಸುವನು. 
 26 ನನ್ನ ಚರ್ಮವು ನಾಶವಾದ ಮೇಲೆಯೂ 
ನಾನು ಈ ದೇಹದಲ್ಲಿ ದೇವರನ್ನು ನೋಡುವೆನು. 
 27 ನಾನು ಕಣ್ಣಾರೆ ದೇವರನ್ನು ನೋಡುವೆನು. 
ಬೇರೆ ಯಾರೂ ಅಲ್ಲದೆ ನಾನೇ ಆತನನ್ನು ನೋಡುವೆನು. 
ಈ ನಿರೀಕ್ಷೆಯಿಂದ ನನ್ನ ಹೃದಯವು ಉಲ್ಲಾಸಗೊಂಡಿದೆ. 
 28 “ ‘ನಾವು ಯೋಬನಿಗೆ ತೊಂದರೆ ಕೊಡೋಣ! 
ಅವನನ್ನು ದೂಷಿಸಲು ಕಾರಣವೊಂದನ್ನು ಹುಡುಕೋಣ’ ಎಂದು ನೀವು ಹೇಳಬಹುದು. 
 29 ಆದರೆ ನೀವೇ ಖಡ್ಗಕ್ಕೆ ಭಯಪಡಬೇಕಾಗಿದೆ! 
ಯಾಕೆಂದರೆ ದೇವರು ದೋಷಿಗಳನ್ನು ಖಡ್ಗದಿಂದ ದಂಡಿಸುತ್ತಾನೆ; 
ನ್ಯಾಯತೀರ್ಪಿನ ಕಾಲ ಉಂಟೆಂದು ಆಗ ನಿಮಗೆ ತಿಳಿಯುವುದು.”