9
ಹೊಸ ಪ್ರಾರಂಭ 
 1 ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ಅನೇಕ ಮಕ್ಕಳನ್ನು ಪಡೆದು ಭೂಮಿಯಲ್ಲೆಲ್ಲಾ ತುಂಬಿಕೊಳ್ಳಿರಿ.  2 ಭೂಮಿಯ ಮೇಲಿರುವ ಪ್ರತಿಯೊಂದು ಪ್ರಾಣಿಯೂ ನಿಮಗೆ ಹೆದರಿ ಭಯಪಡುವುದು; ಆಕಾಶದಲ್ಲಿ ಹಾರಾಡುವ ಪ್ರತಿಯೊಂದು ಪಕ್ಷಿಯೂ ನಿಮಗೆ ಹೆದರಿ ಭಯಪಡುವುದು; ನೆಲದ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಮತ್ತು ಸಮುದ್ರದಲ್ಲಿರುವ ಪ್ರತಿಯೊಂದು ಮೀನೂ ನಿಮಗೆ ಹೆದರಿ ಭಯಪಡುವುದು. ನೀವು ಅವುಗಳಿಗೆಲ್ಲಾ ಒಡೆಯರಾಗಿರುತ್ತೀರಿ.  3 ಮೊದಲು, ನಿಮ್ಮ ಆಹಾರಕ್ಕಾಗಿ ಸಸ್ಯಗಳನ್ನು ಕೊಟ್ಟೆನು. ಈಗ ನಿಮ್ಮ ಆಹಾರಕ್ಕಾಗಿ ಪ್ರತಿಯೊಂದು ಪ್ರಾಣಿಯನ್ನೂ ಕೊಟ್ಟಿದ್ದೇನೆ. ಭೂಮಿಯ ಮೇಲಿರುವ ಎಲ್ಲವನ್ನೂ ನಾನು ನಿಮಗೋಸ್ಕರ ಕೊಟ್ಟಿದ್ದೇನೆ.  4 ಆದರೆ ನಾನು ನಿಮಗೆ ಆಜ್ಞಾಪಿಸುವುದೇನೆಂದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಕೂಡದು.  5 ಯಾವನಾದರೂ ನಿಮ್ಮ ಜೀವಹತ್ಯೆ ಮಾಡಿದರೆ, ನಾನು ಅವನ ಜೀವವನ್ನು ತೆಗೆಯುವೆನು. ಯಾವ ಪ್ರಾಣಿಯಾದರೂ ಮನುಷ್ಯನನ್ನು ಕೊಂದರೆ, ನಾನು ಆ ಪ್ರಾಣಿಯ ಪ್ರಾಣವನ್ನು ತೆಗೆಯುತ್ತೇನೆ. 
 6 “ದೇವರು ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ನಿರ್ಮಿಸಿದನು. 
ಆದ್ದರಿಂದ ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು.” 
 7 “ನೋಹನೇ, ನಿನಗೂ ನಿನ್ನ ಮಕ್ಕಳಿಗೂ ಅನೇಕ ಮಕ್ಕಳು ಹುಟ್ಟಲಿ. ನೀವು ಅಭಿವೃದ್ಧಿಗೊಂಡು ಭೂಮಿಯಲ್ಲಿ ತುಂಬಿಕೊಳ್ಳಿರಿ” ಎಂದು ಹೇಳಿದನು. 
 8-9 ಆಮೇಲೆ ದೇವರು ನೋಹನಿಗೂ ಅವನ ಮಕ್ಕಳಿಗೂ, “ನಾನು ನಿಮಗೆ ಮತ್ತು ಮುಂದೆ ಜೀವಿಸುವ ನಿಮ್ಮ ಜನರಿಗೆ ವಾಗ್ದಾನ ಮಾಡುತ್ತೇನೆ.  10 ನಾವೆಯೊಳಗಿಂದ ಬಂದ ಎಲ್ಲಾ ಪಕ್ಷಿಗಳಿಗೆ, ಎಲ್ಲಾ ಪಶುಗಳಿಗೆ ಮತ್ತು ಪ್ರಾಣಿಗಳಿಗೆ ನಾನು ವಾಗ್ದಾನ ಮಾಡುತ್ತೇನೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೆ ವಾಗ್ದಾನ ಮಾಡುತ್ತೇನೆ.  11 ನಾನು ನಿಮಗೆ ಮಾಡುವ ವಾಗ್ದಾನವೇನೆಂದರೆ: ಭೂಮಿಯ ಮೇಲಿದ್ದ ಎಲ್ಲಾ ಜೀವಿಗಳು ಜಲಪ್ರಳಯದಿಂದ ನಾಶವಾದವು. ಆದರೆ ಮತ್ತೆಂದಿಗೂ ಈ ರೀತಿ ಆಗುವುದಿಲ್ಲ. ಜಲಪ್ರಳಯವು ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ಇನ್ನೆಂದಿಗೂ ನಾಶಗೊಳಿಸುವುದಿಲ್ಲ” ಎಂದು ಹೇಳಿದನು. 
 12 ಇದಲ್ಲದೆ ದೇವರು, “ನನ್ನ ವಾಗ್ದಾನಕ್ಕೆ ಸಾಕ್ಷಿಯಾಗಿ ನಾನು ನಿಮಗೊಂದು ಗುರುತನ್ನು ಕೊಡುವೆನು. ನಾನು ನಿಮ್ಮೊಡನೆ ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೊಡನೆ ಒಡಂಬಡಿಕೆ ಮಾಡಿಕೊಂಡಿರುವುದನ್ನು ಈ ಗುರುತು ತೋರಿಸುತ್ತದೆ. ಈ ಗುರುತು ಯಾವಾಗಲೂ ಇರುವುದು.  13 ನಾನು ಮೋಡಗಳಲ್ಲಿ ಇಟ್ಟಿರುವ ಮುಗಿಲುಬಿಲ್ಲು ನನಗೂ ಭೂಮಿಗೂ ಆಗಿರುವ ಒಡಂಬಡಿಕೆಗೆ ಗುರುತಾಗಿರುವುದು.  14 ನಾನು ಮೋಡಗಳನ್ನು ಭೂಮಿಯ ಮೇಲೆ ಕವಿಸುವಾಗ, ಮೋಡದಲ್ಲಿ ಮುಗಿಲುಬಿಲ್ಲನ್ನು ಕಾಣುವಿರಿ.  15 ನಾನು ಈ ಮುಗಿಲುಬಿಲ್ಲನ್ನು ನೋಡುವಾಗ, ನನಗೂ ನಿಮಗೂ ಮತ್ತು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಆಗಿರುವ ಒಡಂಬಡಿಕೆಯನ್ನು ನೆನಪುಮಾಡಿಕೊಳ್ಳುವೆನು. ಜಲಪ್ರಳಯವು ಇನ್ನೆಂದಿಗೂ ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ನಾಶಗೊಳಿಸುವುದಿಲ್ಲ ಎಂಬುದೇ ಈ ಒಡಂಬಡಿಕೆ.  16 ನಾನು ಮೋಡಗಳಲ್ಲಿರುವ ಮುಗಿಲುಬಿಲ್ಲನ್ನು ನೋಡುವಾಗ, ಶಾಶ್ವತವಾದ ಈ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುವೆನು. ನನಗೂ ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗಳಿಗೂ ಆದ ಒಡಂಬಡಿಕೆಯನ್ನು ನೆನಸಿಕೊಳ್ಳುವೆನು” ಎಂದು ಹೇಳಿದನು. 
 17 ಆದ್ದರಿಂದ ದೇವರು ನೋಹನಿಗೆ, “ಭೂಮಿಯ ಮೇಲಿರುವ ಎಲ್ಲಾ ಜೀವಿಗಳೊಡನೆ ನಾನು ಮಾಡಿಕೊಂಡ ಒಡಂಬಡಿಕೆಗೆ ಈ ಮುಗಿಲುಬಿಲ್ಲು ಗುರುತಾಗಿರುವುದು” ಎಂದು ಹೇಳಿದನು. 
ಸಮಸ್ಯೆಗಳ ಪ್ರಾರಂಭ 
 18 ನೋಹನ ಗಂಡುಮಕ್ಕಳು ನೋಹನೊಡನೆ ನಾವೆಯೊಳಗಿಂದ ಹೊರಬಂದರು. ಅವರ ಹೆಸರುಗಳು: ಶೇಮ್, ಹಾಮ್ ಮತ್ತು ಯೆಫೆತ್ (ಹಾಮನು ಕಾನಾನನ ತಂದೆ.)  19 ಈ ಮೂವರು ನೋಹನ ಗಂಡುಮಕ್ಕಳು. ಭೂಮಿಯ ಮೇಲಿರುವ ಜನರೆಲ್ಲರಿಗೂ ಇವರೇ ಮೂಲಪುರಷರು. 
 20 ನೋಹನು ರೈತನಾದನು. ಅವನು ಒಂದು ದ್ರಾಕ್ಷಿತೋಟ ಮಾಡಿದನು.  21 ಒಮ್ಮೆ ಅವನು ದ್ರಾಕ್ಷಾರಸವನ್ನು ಕುಡಿದು ಮತ್ತೇರಿದ್ದರಿಂದ ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಮಲಗಿಕೊಂಡನು.  22 ಕಾನಾನನ ತಂದೆಯಾದ ಹಾಮನು ತನ್ನ ತಂದೆ ಬೆತ್ತಲೆಯಾಗಿ ಮಲಗಿರುವುದನ್ನು ಕಂಡು ಈ ವಿಷಯವನ್ನು ಗುಡಾರದ ಹೊರಗಿದ್ದ ತನ್ನ ಸಹೋದರರಿಗೆ ತಿಳಿಸಿದನು.  23 ಆಗ ಶೇಮನು ಮತ್ತು ಯೆಫೆತನು ಒಂದು ಕಂಬಳಿಯನ್ನು ತಮ್ಮ ಬೆನ್ನಿನ ಮೇಲೆ ಹಾಕಿಕೊಂಡು ಹಿಮ್ಮುಖವಾಗಿ ಗುಡಾರದೊಳಗೆ ಬಂದು ತಮ್ಮ ತಂದೆಗೆ ಹೊದಿಸಿದರು. ಅವರು ಅವನ ಬೆತ್ತಲೆ ದೇಹವನ್ನು ನೋಡಲಿಲ್ಲ. 
 24 ಆಮೇಲೆ ನೋಹನು ಎಚ್ಚರಗೊಂಡನು. ಕಿರಿಮಗನಾದ ಹಾಮನು ಏನು ಮಾಡಿದನು ಎಂದು ಅವನಿಗೆ ತಿಳಿಯಿತು.  25 ಆದ್ದರಿಂದ ನೋಹನು, 
“ಕಾನಾನನು ತನ್ನ ಸಹೋದರರಿಗೆಲ್ಲಾ ಕೀಳಾದ ಗುಲಾಮನಾಗಿರಲಿ” 
ಎಂದು ಶಪಿಸಿದನು. 
 26 ಅಲ್ಲದೆ ನೋಹನು, 
“ಶೇಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! 
ಕಾನಾನನು ಶೇಮನಿಗೆ ಗುಲಾಮನಾಗಿರಲಿ. 
 27 ದೇವರು ಯೆಫೆತನಿಗೆ ಹೆಚ್ಚು ಭೂಮಿಯನ್ನು ಕೊಡಲಿ. 
ಶೇಮನ ಗುಡಾರಗಳಲ್ಲಿ ದೇವರು ವಾಸಿಸಲಿ 
ಮತ್ತು ಕಾನಾನನು ಅವರಿಗೆ ಗುಲಾಮನಾಗಿರಲಿ” ಎಂದು ಹೇಳಿದನು. 
 28 ಜಲಪ್ರಳಯದ ನಂತರ ನೋಹನು ಮುನ್ನೂರೈವತ್ತು ವರ್ಷ ಬದುಕಿದ್ದನು.  29 ನೋಹನು ಒಟ್ಟು ಒಂಭೈನೂರೈವತ್ತು ವರ್ಷ ಬದುಕಿ ಸತ್ತನು.